ನಾನಾಗ 7ನೇ ಕ್ಲಾಸಿನಲ್ಲಿ ಓದ್ತಾ ಇದ್ದೆ . ನಾನು ಓದ್ತಾ ಇದ್ದಂತಹ ಆ ಹಳ್ಳಿಯ ಶಾಲೆಯಲ್ಲಿ ವರ್ಷವೂ ವಿದ್ಯಾರ್ಥಿ ನಾಯಕನ ಸ್ಥಾನಕ್ಕೆ ಚುನಾವಣೆ ನಡೀತಾ ಇತ್ತು . 3 ನೇ ತರಗತಿಯಿಂದ 7ನೆ ತರಗತಿಯವರೆಗೆ ಓದ್ತಾ ಇರುವ ಎಲ್ಲರೂ ಮತ ಚಲಾವಣೆಗೆ ಅರ್ಹರು . 7ನೇ ತರಗತಿಯ ವಿದ್ಯಾರ್ಥಿಗಳಿಗೆ 2001-2002 ನೆ ಇಸವಿಯ ಸಮಯದಲ್ಲಿ ಪಬ್ಲಿಕ್ ಪರೀಕ್ಷೆ ಇರುತಿತ್ತು. ಅದು ಒಂಥರ ಟರ್ನಿಂಗ್ ಪಾಯಿಂಟ್ ಇದ್ದ ಹಾಗೆನೆ. ನನ್ನ ಕನ್ನಡ ಮೇಷ್ಟ್ರು ನನಗೆ ಆ ಚುನಾವಣೆಯಲ್ಲಿ ಸ್ಪರ್ಧಿಸಲು ಹೇಳಿದರು . ಕಾರಣ ಇಷ್ಟೇ ,ನಾನು 3ನೆ ತರಗತಿಯಿಂದ stage artist ಹಾಗು ಓದಿನಲ್ಲಿ ಸ್ವಲ್ಪ ಮುಂದಿದ್ದೆ . ಹಾಸ್ಯ ನಾಟಕಗಳಲ್ಲಿ , ಚಿಕ್ಕ ಪುಟ್ಟ skits ಅಲ್ಲಿ ನಟಿಸುತ್ತಾ ,ನಿರ್ದೇಶಿಸುತ್ತ ಸ್ವಲ್ಪ ಮಟ್ಟಿಗೆ ಜನಪ್ರೀಯನಾಗಿದ್ದೆ . ಹಾಗಾಗಿ ನಾನು ಚುನಾವಣೆಗೆ ನಿಂತರೆ ಗೆದ್ದೇ ಗೆಲ್ತೀನಿ ಅನ್ನೋ ಆತ್ಮ ವಿಶ್ವಾಸ ಇದ್ದಿತ್ತು .
ಜೂನ್ ಮಳೆಗಾಲದ ಸಮಯ . ಚುನಾವಣೆಯ ಹಣಾಹಣಿ ಶುರು. ನನ್ನ ಪ್ರತಿ ಸ್ಪರ್ಧಿಗಳಾಗಿ ನನ್ನ ಅಣ್ಣ (ಸ್ವಂತ ಅಣ್ಣ ಅಲ್ಲ. ದೊಡ್ಡಪ್ಪನ ಮಗ ) ಹಾಗು ಇನ್ನೂ 5 ಜನರು ಭಾಗವಹಿಸಿದ್ದರು . ಚುನಾವಣ ಪ್ರಚಾರವೂ ಶುರು . ಆದರೆ ನನಗೆ ಒಂಥರಾ ಸಂಕೋಚ ಶುರು ಆಗಿತ್ತು . ಯಾಕೆಂದರೆ ನನ್ನ ಪ್ರತಿಸ್ಪರ್ಧಿ ನನ್ನ ಪ್ರಾಣ ಸ್ನೇಹಿತ ಹಾಗೂ ಅಣ್ಣ . ಇಬ್ಬರಲ್ಲೂ ಇದೆ ಭಾವನೆ ಮೂಡೋಕೆ ಶುರು ಆಗಿತ್ತು . ಒಂದು ನನ್ನ ಹತ್ತಿರ ಹೇಳಿದ-"ಪ್ರದೀಪ , ನೀನ್ ನಿನ್ಥ್ಕೊಂದ್ರೆ ನಾನು ನಿಲ್ಲೊಲ್ಲ. ". ನಾನು ಹೇಳಿದೆ -"ಆಯ್ತು. ನಾನು ನಿಲ್ಲೋಲ್ಲ . ನಿನ್ ಪರವಾಗಿ ಪ್ರಚಾರ ಮಾಡ್ತೀನಿ ". ಅದೇ ದಿನ ನಾನೂ ಕೂಡ ನಾಮ ಪತ್ರವನ್ನು ವಾಪಸ್ ತೆಗೆದುಕೊಂಡೆ .
ಈಗ ಪ್ರತಿ ಕ್ಲಾಸೀಗೂ ಹೋಗಿ ವೋಟು ಕೇಳಬೇಕು . ಎರಡು ಗುಂಪಾಗಿದ್ದ ನಮ್ಮ ತಂಡಗಳು ಈಗ ಒಂದೇ ಗುಂಪು . ನಮ್ಮ ಎದುರಾಳಿಗಳಲ್ಲಿ ಇಬ್ಬರು ಹುಡುಗೀಯರು . ಅವರ ಜೊತೆ ನಾನು ತುಂಬಾ ವರ್ಷಗಳಿಂದ ಮಾರ್ಕ್ಸ್ ತೆಗೆದುಕೊಳ್ಳುವುದರಲಿ ಪೈಪೂಟಿ ಮಾಡ್ತಾ ಇದ್ದೆ.. ಗ಼ೆಲ್ತಾನೆ ಇದ್ದಿದ್ದೆ ಕೂಡ . ಆದರೆ ಚುನಾವಣೆಯಲ್ಲಿ ಅವರನ್ನು ಸೋಲಿಸದೆ ಇದ್ರೆ ನನ್ನ ಮರ್ಯಾದೆ ಹೋಗುತ್ತೆ ಅನ್ನೋ ಭಯ. ಅದೂ ಅಲ್ಲದೆ ಅವರ ಕೈಗೆ ಅಧಿಕಾರ ಸಿಕ್ಕಿದ್ರೆ ಎಲ್ಲಿ ನಮ್ಮನ್ನು ಬುಡ ಮೇಲು ಮಾಡಿ ಬಿಡ್ತಾರೋ ಅನ್ನೋ ಭಯ . ಒಡೆದು ಎರಡು ಗುಂಪಾಗಿದ್ದ ನನ್ನ ಹಾಗು ನನ್ನ ಅಣ್ಣನ ಗುಂಪು ಈವಾಗ ಒಂದು ಗುಂಪು . ಇನ್ನು ಚುನಾವಣೆ ಗೆಲ್ಲೋದು ಒಂದೇ ಬಾಕಿ . ಇಲ್ಲಿ ರಾಜಕೀಯ ಚದುರಂಗ ಆಡೋದು ಮುಖ್ಯ ಆಗಿತ್ತು . ಏನೇ ಆದರು ಅಧಿಕಾರ ನನ್ನ ಗುಂಪಿಗೆ ಬರಬೇಕು . ಈ ಆಟದಲ್ಲಿ ನಾನು ಬಳಸಿದ್ದು ನಿಜವಾದ ರಾಜಕೀಯ ಪಕ್ಷದವರು ಬಳಸುವ ತಂತ್ರ . ಈ ತಂತ್ರವನ್ನು ಊರಿನ\ ಚುನಾವಣೆ ಸಂದರ್ಭದಲ್ಲಿ ನಡೆಯುತ್ತಿದ್ದ ವಿದ್ಯಮಾನಗಳನ್ನು ನೋಡಿ ... ದೊಡ್ಡವರಿಗೆ ನೋಟುಗಳು ಚುನಾವಣೆ ಸಂದರ್ಭಗಳಲ್ಲಿ ರಾಜಕೀಯ ನಾಯಕರುಗಳು ಕೊಡುತಿದ್ದರು . ಇಲ್ಲಿ ನಾವೆಲ್ಲಾ ಚಿಕ್ಕ ಮಕ್ಕಳು . ಚಿಕ್ಕ ಮಕ್ಕಳನ್ನು ಬುಟ್ಟಿಗೆ ಹಾಕಿಕೊಳ್ಳಬೇಕಾದ್ರೆ ಚಾಕಲೇಟ್ ಹಂಚಿಕೆ ಮಾಡಲೇಬೇಕು . ಆದರೆ ಅದಕ್ಕೆ ಬೇಕಾದ ದುಡ್ಡು ಯಾರಲ್ಲಿ ಕೇಳೋದು ? ಮನೆಯಲ್ಲಿ ಕೇಳಿದರೆ ಪೆಟ್ಟು ಬೀಳೋದು ಗ್ಯಾರಂಟಿ ..
ನನ್ನ ಊರು ಇರುವುದು ಕರಾವಳಿಯಲ್ಲಿ . ಅಲ್ಲಿ ಗೇರು ಬೀಜದ ಮರಗಳು ಪ್ರತಿ ಮನೆಯಲ್ಲಿ ಇರುತ್ತವೆ (ಈಗ ಹೆಚ್ಚಿನವರು ಕಡಿದು ಸೈಟ್ ಮಾಡಿದಾರೆ ). ಒಂದು ಗೇರು ಬೀಜದ ಬೆಲೆ ಹತ್ತು ಪೈಸೆಗಳು . ಹಾಗೆಯೇ ನಮ್ಮ ಬಾಲ್ಯದಲ್ಲಿ ಶುಂಟಿ ಪೆಪ್ಪರ ಮಿಂಟ್ ಬೆಲೆ ಐದು ಪೈಸೆಗಳು . ಈಗ ನಮ್ಮ ಕೆಲಸ ಗೇರು ಬೀಜಗಳನ್ನು ಸಂಗ್ರಹ ಮಾಡೋದು ಹಾಗೆಯೇ ಮನೆಯಲ್ಲಿ ಸುಳ್ಳು ಹೇಳಿ ಹಣ ಪಡೆದು ಕೊಳ್ಳುವುದು . ನನ್ನ ಅಮ್ಮ ನನಗೆ ಹತ್ತು ರೂಪಾಯೀ ಕೊಟ್ಟಳು . ಪ್ರತೀ ವಿದ್ಯಾರ್ಥಿಗಳಿಗೂ ಎರಡೆರಡು ಶುಂಟಿ ಪೆಪ್ಪರ ಮಿಂಟ್ ಕೊಟ್ಟು ಬುಟ್ಟಿಗೆ ಹಾಕ್ಕೊಳ್ಳೋ ಸಂಪೂರ್ಣ ರೂಪು ರೇಷೆ ನಡೆಯಿತು . ಶಾಲೆಯಲ್ಲಿ ಕೊಟ್ಟರೆ P.E.T ಸರ್ ಹತ್ತಿರ ಒದೆ ಬೀಳೋದು ಗ್ಯಾರಂಟಿ ಅಂತ ಗೊತ್ತು . ಅದಕ್ಕೆ ಸಂಜೆ ಶಾಲೆ ಬಿಟ್ಟ ನಂತರ ದಾರಿ ಮಧ್ಯೆ ಚಾಕಲೇಟ್ ಕೊಡುವ ಪ್ಲಾನ್ ರೆಡಿ . ಪ್ರತಿಯೊಬ್ಬರಿಗೂ ಚಾಕಲೇಟ್ ಕೊಟ್ಟು ನನ್ನ ಅಣ್ಣನಿಗೆ ವೋಟು ಹಾಕಿ ಅಂತ ನಡೆಯಿತು . ಹಾಗೆಯೇ, ನಮಗೆ ಅಧಿಕಾರ ಬಂದರೆ ಪ್ರತಿ ಶನಿವಾರ ಕಾರ್ಯಕ್ರಮಗಳು ನಡೆಯಿತ್ತವೆ . ಅದರಿಂದ ಎಲ್ಲ ವಿದ್ಯಾರ್ಥಿಗಳು ಕ್ಲಾಸ್ ತಪ್ಪಿಸಿಕೊಳ್ಳಬಹುದು ಎಂಬಿತ್ಯಾದಿ ಭರವಸೆಗಳು . . ಎಲ್ಲ ವಿದ್ಯಾರ್ಥಿಗಳನ್ನು ಸೆಳೆದುಕೊಳ್ಳುವಲ್ಲಿ ನಾವು ಸಫಲರಧೆವು .
ಚುನಾವಣೆ ಅಂದ ಮೇಲೆ ಗುಪ್ತಚಾರಿಕೆ ನಡೆಯುದು ಸಾಮಾನ್ಯ .. ಹಾಗೆಯೇ ನಮ್ಮ ಮೇಲೆ ನಮ್ಮ ವಿರೋಧಿಗಳ ಗುಪ್ತಚರ್ಯೇ ನಡೆದೇ ಬಿಟ್ಟಿತ್ತು . p.e.t ಸರ್ ಕಡೆಯಿಂದ ನನಗೊಂದು ಬಿಸಿ ಬಿಸಿ ಕಜ್ಜಾಯ ಕೂಡ ಸಿಕ್ಕಿತ್ತು .. ನಮ್ಮ ಯೋಜನೆ ಬುಡ ಮೇಲು ಆಗಿದ್ದಕ್ಕೆ ಬೇಜಾರು ಆಯಿತು . ಆದರೂ ಛಲ ಬಿಡದೆ ಮಕ್ಕಳಲ್ಲಿ ವೋಟು ಕೇಳಿದೆ . ವೋಟು ಹಾಕೋಕೆ ಹೋಗಲು ಎಲ್ಲಾ ವಿದ್ಯಾರ್ಥಿಗಳು ಸಾಲಿನಲ್ಲಿ ನಿಂತಿರೋವಾಗ ಪೆನ್ ಕೂಡ ಕೊಟ್ಟು ಅವರ ಮನವೋಲಿಸಿಕೊಳ್ಳೊಕೆ ಪ್ರಯತ್ನ ಪಟ್ಟೆ.
ಆ ದಿನ ಫಲಿತಾಂಶದ ದಿನ. ನನ್ನ ಅಣ್ಣ ಗೆಲ್ತಾನೆ ಅನ್ನೋ ಆತ್ಮ ವಿಶ್ವಾಸ ಇದ್ರೂ ಎಲ್ಲೋ ಒಂದ್ ಕಡೆ ಭಯ . ಫಲಿತಾಂಶ ಪ್ರಕಟಿಸಿದಾಗ ಗೆದ್ದಿದ್ದು ನನ್ನ ಅಣ್ಣಾನೇ ... ಅದೂ ಭರ್ಜರಿ ಅಂತರದಿಂದ .. ಒಬ್ಬ ಎದುರಾಳಿಗೆ ಅವನ ತಂಗಿ ,ತಮ್ಮ ಹಾಗೂ ಅವನ ಸಂಭಂದಿಕರ ಮಕ್ಕಳೂ ಕೂಡ ವೋಟು ಹಾಕಿರಲಿಲ್ಲ . ಅವನು ಗಳಿಸಿದ್ದು ಕೇವಲ ಒಂದೇ ಒಂದು ವೋಟು . ಅದು ಅವನದ್ದೇ ಆಗಿತ್ತು . ನಮ್ಮ ಎದುರಾಳಿ ಹುಡುಗಿಯರ ಮುಖ ನೋಡೋದಿಕ್ಕೂ ಆಗ್ತಿರ್ಲಿಲ್ಲ ..
ಇನ್ನು ಅಧಿಕಾರ ನಡೆಸುವ ಸಮಯ . ಅದಾಗಲೇ ನಮ್ಮ ಮೇಷ್ಟ್ರುಗಳಿಗೆ ಈ ಚುನಾವಣೆಯ ಹಿಂದಿನ ರಹಸ್ಯ ಗೊತ್ತಾಗಿತ್ತು . ಅವರು ನನ್ನ ಹಾಗೂ ನನ್ನ ಅಣ್ಣನ ಮಧ್ಯೆ ಬಿರುಕು ಮೂಡಿಸುವುದಕ್ಕಾಗಿ ನನ್ನನ್ನು ಅವಿರೋಧವಾಗಿ ವಿರೋಧ ನಾಯಕನಾಗಿ ಬಲವಂತವಾಗಿ ಪ್ರಕಟಿಸಿದರು . ಕಿಂಗ್ ಮೇಕರ್ ಆಗಿ ಇರಬೇಕು ಅನ್ನೋ ಆಸೇನ ಮಣ್ಣು ಪಾಲು ಮಾಡಿ ಬಿಟ್ರು . ಈಗ ನಾನು ನನ್ನ ಅಣ್ಣ ಸರಿಯಾಗಿ ಕೆಲಸ ಮಾಡದೆ ಇದ್ದರೆ ಅವನ ವಿರುದ್ದ ಕ್ರಮ ಜರುಗಿಸಬೇಕು . ಒಬ್ಬ ಶಾಲಾ ನಾಯಕ ಮಾಡಬೇಕಾದ ಕಾರ್ಯವನ್ನು ವಿರೋಧ ನಾಯಕನಾಗಿ ನಾನು ಮಾಡಬೇಕಾಯ್ತು . ನಮ್ಮ ಗುಂಪಿನ ಎಲ್ಲರೂ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದರು .. ನನ್ನ ಅಣ್ಣ ತುಂಬಾನೇ ಚೆನ್ನಾಗಿ ಅಧಿಕಾರ ನಡೆಸಿದ .. ನಮ್ಮ ಗುಂಪಿನವರಿಗೆ ಎಲ್ಲೋ ಏನೂ ತೊಂದರೆ ಆಗ್ತಾ ಇರ್ಲಿಲ್ಲ ಆಗಿತ್ತು ..
ಸಂದೀಪ ಅನ್ನೋ ಗೆಳೆಯ ಕ್ರೀಡಾ ನಾಯಕನಾಗಿ ಅತ್ಯುತ್ತಮ ಕೆಲಸ ಮಾಡಿದ್ದ .. ಖೊಖೊ ಆಟದಲ್ಲಿ ನಮ್ಮ ಶಾಲೆಗೇ ಒಳ್ಳೆಯ ಹೆಸರು ಬಂದಿತ್ತು .. ಈಗಿನ ಶಾಲೆಯಲ್ಲಿ ಇದ್ದ ಹಾಗೆ ನಮ್ಮ ಗುರುಗಳು ಇರ್ಲಿಲ್ಲ ಆಗಿತ್ತು .. ಅತ್ಯುತ್ತಮ ಗುರುಗಳಾಗಿದ್ದರು . . ಎಲ್ಲರೂ ಉತ್ಸಾಹಿಗಳಾಗಿದ್ದರು .. ಇದನ್ನೇ ಉಪಯೋಗಿಸಿ ಶಾಲೆಯಲ್ಲಿ ಇನ್ನೂ ಶಿಸ್ತು ತರಲು ಯೋಜನೆ ರೂಪಿಸಿದೆ . ನನ್ನ ಕೆಲವೊಂದು ನಿಯಮಗಳಿಂದಾಗಿ ಅಕ್ಕ ಪಕ್ಕದ ಸಣ್ಣ ಪುಟ್ಟ ಅಂಗಡಿಗಳಲ್ಲಿ ವ್ಯಾಪಾರ ಕಡಿಮೆ ಆಯಿತು ... ಇಷ್ಟೇ , ಅಂಗಡಿಯ ತಿಂಡಿ ಯಾರದ್ರೂ ತಿನ್ನೋವಾಗ ನನ್ನ ತಂಡದ ಯಾರೇ ಗಮನಿಸಿದರೂ ಅವರ ವಿರುದ್ದ ಒಂದು ಕಂಪ್ಲೇಂಟ್ ರೆಡಿ ಆಗ್ತಾ ಇದ್ದಿತ್ತು. ಪ್ರತೀ ಶನಿವಾರ ಬಾಲ ಸಭೆ ಅನ್ನೋ ಸಮಾರಂಭ ಮಾಡಿಸಿ ಅಲ್ಲಿ ಮನೋರಂಜನೆಯ ಜೊತೆ ನಮ್ಮ ಕಂಪ್ಲೇಂಟ್ಗೆ ತುತ್ತಾದವರು ಎಲ್ಲರ ಎದುರು ಸಭೆಯಲ್ಲಿ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಬೇಕಾಗಿತ್ತು.ಪ್ರತಿ ಕ್ಲಾಸಿಗೂ ಒಬ್ಬೊಬ ಮೇಲುಸ್ತುವಾರಿ ನೋಡಿಕೊಳ್ಳುತಿದ್ದ .. ನಾನು ಒಂದು ತರಗತಿಯನ್ನು ತಪ್ಪದೆ ಭೇಟಿ ಮಾಡುತಿದ್ದೆ .. ಒಂದು ಸುಂದರವಾದ ಮುಖವನ್ನು ನೋಡುವ ಸಲುವಾಗಿ .. ಆದರೆ ಅದು ಆ ವರ್ಷಕ್ಕೆ ಕೊನೆ ಆಯಿತು .. study ಪಿರಿಯಡ್ ಅನ್ನು ಉತ್ತಮವಾಗಿ ಉಪಯೋಗಿಸಿ ಕೊಳ್ಳುವ ಹಾಗೆ ಮಾಡಿ ಆ ವರ್ಷ ಪಬ್ಲಿಕ್ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳು ಬಂದು ನನ್ನ ಶಾಲೆಗೆ ಹೆಸರೂ ಬಂತು,. ನಾನು ಶಾಲೆಗೆ first ಬಂದೆ .
ಇಲ್ಲಿ ನಾನು ಹೇಳೋಕೆ ಹೊರಟಿದ್ದು ನನ್ನ ಬಗ್ಗೆ ಅಲ್ಲ .. ಒಂದು ಒಳ್ಳೆಯ , ಉತ್ಸಾಹಿ ತಂಡ ಹಾಗೂ ಸ್ಪರ್ಧಾತ್ಮಕ ಪರಿಸರ ಇದ್ದರೆ ಏನೋ ಒಂದು ಒಳ್ಳೆಯದನ್ನು ಮಾಡಬಹುದು .. ರಾಜಕೀಯದಲ್ಲಿ ಪಗಡೆಯಾಟ ನಡೆಯಲಿ .ಅಲ್ಲಿ ಯಾರಿಗೂ ಹಾನಿ ಆಗಬಾರದು .. ಒಂದು ಉತ್ತಮ ಅಧಿಕಾರ ನಡೆಸಲು , ಅದರಿಂದ ಆ ಪರಿಸರಕ್ಕೆ ಒಳ್ಳೆಯದು ಆಗುವುದಾದರೆ ರಾಜಕೀಯ ಪಗಡೆಯಾಟ ಆಡುವುದು ತಪ್ಪಲ್ಲ ..
... (ಇನ್ನೂ ಬಾಕಿ ಇದೆ)